ಹೊಸ ರೇಷನ್ ಕಾರ್ಡ್ ವಿತರಣೆ ಸದ್ಯಕ್ಕಿಲ್ಲ

 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಹೊಸ ರೇಷನ್ ಕಾರ್ಡ್ಗೋಸ್ಕರ ಅರ್ಜಿ ಸಲ್ಲಿಸುವ ವೆಬ್‌ಸೈಟ್ ತೆರೆದ ಕೂಡಲೇ ‘ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ಆನಂತರ’ ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಹೊಸ ಕಾರ್ಡ್ಗಳ ವಿತರಣೆ ಸದ್ಯಕ್ಕೆ ಇಲ್ಲ ಎನ್ನುವ ಸಂದೇಶವನ್ನು ಇಲಾಖೆ ರವಾನಿಸಿದೆ. 2023 ರ ಮಾರ್ಚ್ ತನಕ ಸ್ವೀಕರಿಸಿರುವ ಅರ್ಜಿಗಳಿಗೆ ಮಾತ್ರ ಪಡಿತರ ಚೀಟಿ ವಿತರಣೆಗೆ ಕ್ರಮ ವಹಿಸಿಸಲಾಗಿದೆ ಎಂದು ಸ್ಪಷ್ಟೀಕರಣವನ್ನೂ ನೀಡಲಾಗಿದೆ. ಹಾಗಾಗಿ ಹೊಸ ಕಾರ್ಡ್ಗಳ ನಿರೀಕ್ಷೆಯಲ್ಲಿ ಇರುವವರಿಗೆ ಸದ್ಯಕ್ಕಂತೂ ಕಾಯುವುದೊಂದೇ ಮಾರ್ಗ.

ಆರ್ಥಿಕವಾಗಿ ದುರ್ಬಲರಾಗಿರುವ ಮತ್ತು ಹಿಂದುಳಿದ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು ಕೊಡುತ್ತಿದೆ. ಸರ್ಕಾರದ ವಿವಿಧ ಯೋಜನೆಗಳಿಗೆ ಮಾನದಂಡವಾಗಿಯೂ ಬಿಪಿಎಲ್ ಕಾರ್ಡ್ ಬಳಕೆ ಆಗುತ್ತಿದೆ. ಈಗಿನ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಭರವಸೆ ಕೊಟ್ಟಿದ್ದ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಗೃಹಲಕ್ಷಿö್ಮÃ ಯೋಜನೆಗೆ ರೇಷನ್ ಕಾರ್ಡ್ನಲ್ಲಿ ಇರುವ ಮನೆಯ ಯಜಮಾನಿಯನ್ನು ಫಲಾನುಭವಿಯಾಗಿ ಗುರುತಿಸಿದ ನಂತರ ಹೊಸ ಪಡಿತರ ಚೀಟಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ರಾಜ್ಯದಲ್ಲಿ ಈಗಾಗಲೇ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡ್ಗಳು ಇರುವುದರಿಂದ ಸರ್ಕಾರ ಹೊಸ ಬಿಪಿಎಲ್ ಕಾರ್ಡ್ಗಳ ವಿತರಣೆ ನಿಲ್ಲಿಸಿದೆ. ಈ ಸಂಬAಧ ಅರ್ಜಿ ಕೂಡ ಸ್ವೀಕರಿಸುತ್ತಿಲ್ಲ. ಹೊಸ ಪಡಿತರ ಚೀಟಿಗಳನ್ನು ನೀಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಸುಳ್ಳು ಸುದ್ದಿ ಮತ್ತು ವದಂತಿ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸ್ಪಷ್ಟೀಕರಣವನ್ನೂ ನೀಡಿದೆ.

ಹೊಸ ಆದ್ಯತಾ ಪಡಿತರ ಚೀಟಿಗಾಗಿ ರಾಜ್ಯದಲ್ಲಿ ಒಟ್ಟು 3,22,483 ಅರ್ಜಿಗಳು ಸಲ್ಲಿಕೆಯಾಗಿದೆ. ಕೊಡಗಿನಲ್ಲಿ 1,254 ಫಲಾನುಭವಿಗಳು ಅರ್ಜಿ ಸಲ್ಲಿಸಿ ನೂತನ ಕಾರ್ಡ್ಗಾಗಿ ಕಾಯುತ್ತಿದ್ದಾರೆ. ಆದರೆ ಇವರಿಗೆ ಸದ್ಯಕ್ಕೆ ಬಿಪಿಎಲ್ ಕಾರ್ಡ್ಗಳು ಸಿಗುವ ಲಕ್ಷಣಗಳು ಇಲ್ಲ. ಅನಧಿಕೃತವಾಗಿ ಕಾರ್ಡ್ ಹೊಂದಿರುವವರನ್ನು ಪತ್ತೆ ಹಚ್ಚಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮುಂದಾಗಿದ್ದು, ಇದೊಂದು ಹಂತಕ್ಕೆ ಬಂದ ನಂತರ ಹೊಸ ಬಿಪಿಎಲ್ ಕಾರ್ಡ್ಗಳ ವಿತರಣೆ ಆರಂಭವಾಗಲಿದೆ. ಇನ್ನು ಮುಂದೆ ಬಿಪಿಎಲ್ ಕಾರ್ಡ್ಗಳು ಅನರ್ಹರ ಪಾಲಾಗುವುದನ್ನು ತಪ್ಪಿಸಲು ನೂತನ ಕಾರ್ಡ್ಗಳನ್ನು ನೀಡುವ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ಸರ್ಕಾರ ನಿರ್ಧರಿಸಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ನಂತರ ಅರ್ಜಿದಾರ ಬಿಪಿಎಲ್ ಕಾರ್ಡ್ಗೆ ಅರ್ಹ ಎಂದು ಸಾಬೀತಾದರೆ ಮಾತ್ರ ಬಿಪಿಎಲ್ ಕಾರ್ಡ್ ವಿತರಿಸಲಾಗುವುದು.

ಬಿಪಿಎಲ್ ಕಾರ್ಡ್ಗಳನ್ನು ವಿತರಿಸಲು ಈಗಾಗಲೇ ಸರ್ಕಾರ ಹಲವು ಮಾನದಂಡಗಳನ್ನು ರೂಪಿಸಿದೆ. ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡAತೆ ಎಲ್ಲಾ ಖಾಯಂ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳನ್ನು ಆದ್ಯತಾ ಪಡಿತರ ಚೀಟಿ ಸವಲತ್ತಿನಿಂದ ಹೊರಗಿಡಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟರ್ ಒಣಭೂಮಿ ಅಥವಾ ಇಷ್ಟೇ ಪ್ರಮಾಣದ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಸ್ವಂತವಾಗಿ ಹೊಂದಿರುವವರು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ, ಟ್ರಾಕ್ಟರ್, ಮಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬ ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಗಿಂತಲೂ ಹೆಚ್ಚು ಇರುವ ಕುಟುಂಬಗಳು ಕೂಡ ಆದ್ಯತಾ ಪಡಿತರ ಚೀಟಿ ಪಡೆದುಕೊಳ್ಳಲು ಅನರ್ಹವಾಗಿರುತ್ತವೆ.

ಬಿಪಿಎಲ್ ಸೇರಿದಂತೆ ಆದ್ಯತಾ ಪಡಿತರ ಚೀಟಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವವರಲ್ಲಿ ಸರ್ಕಾರದ ಮಾನದಂಡ ಉಲ್ಲಂಘಿಸಿರುವುದು ಕಂಡು ಬಂದರೆ ಅಂಥ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಒಂದು ವೇಳೆ ಮಾನದಂಡ ಉಲ್ಲಂಘಿಸಿ ಆದ್ಯತಾ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದರೆ ಅಂಥವರ ಕಾರ್ಡ್ಗಳು ರದ್ದಾಗಲಿವೆ. ಜತೆಗೆ ಸುಳ್ಳು ಮಾಹಿತಿ ಕೊಟ್ಟು ಕಾರ್ಡ್ ಪಡೆದುಕೊಂಡಿರುವುದಕ್ಕೆ ದಂಡ ವಿಧಿಸುವ ಸಾಧ್ಯತೆಗಳು ಕೂಡ ಇದೆ. ಇವುಗಳನ್ನು ಹೊರತುಪಡಿಸಿ 2023 ರ ಮಾರ್ಚ್ ತನಕ ಸ್ವೀಕರಿಸಿರುವ ಅರ್ಜಿಗಳಿಗೆ ಆದ್ಯತಾ ಪಡಿತರ ಚೀಟಿಗಳನ್ನು ವಿತರಿಸುವ ಜವಾಬ್ದಾರಿಯನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿದೇಶಕರು, ಮತ್ತು ಉಪನಿರ್ದೇಶಕರಿಗೆ ನೀಡಲಾಗಿದೆ.


ಕೊಡಗಿನಲ್ಲಿ ಪ್ರಸ್ತುತ 9,601 ಅಂತ್ಯೋದಯ ಅನ್ನ ಯೋಜನೆಯ ಕಾರ್ಡ್ಗಳಿದ್ದು, 31,047 ಜನ ಫಲಾನುಭವಿಗಳು ಈ ಕಾರ್ಡ್ನ ಪ್ರಯೋಜನ ಪಡೆಯುತ್ತಿದ್ದಾರೆ. 1,01,215 ಬಿಪಿಎಲ್ ಕಾರ್ಡ್ಗಳಿದ್ದು, 3,03,536 ಫಲಾನುಭವಿಗಳು ಕಾರ್ಡ್ ಸವಲತ್ತು ಪಡೆಯುತ್ತಿದ್ದಾರೆ. ಹೊಸ ಪಡಿತರ ಚೀಟಿಗಳಿಗಾಗಿ ಆನ್‌ಲೈನ್‌ನಲ್ಲಿ 6,850 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 5,188 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 408 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 1,254 ಅರ್ಜಿಗಳಿಗೆ ಸಂಬAಧಿಸಿದ ರೇಷನ್ ಕಾರ್ಡ್ಗಳನ್ನು ವಿತರಿಸಲು ಬಾಕಿ ಇದೆ.


ಸರ್ಕಾರದ ವಿವಿಧ ಯೋಜನೆಗಳಿಗೆ ಮಾನದಂಡವನ್ನಾಗಿ ಬಿಪಿಎಲ್ ಕಾರ್ಡ್ಗಳನ್ನು ಬಳಸಲಾಗುತ್ತಾದರೂ ಗೃಹಲಕ್ಷಿö್ಮÃ ಯೋಜನೆ ಜಾರಿಗೆ ಬಂದ ನಂತರ ಇದರ ಮಹತ್ವ ಜಾಸ್ತಿಯಾಗಿದೆ. ಹಾಗಾಗಿ ಸಹಜವಾಗಿಯೇ ಬಿಪಿಎಲ್ ಕಾರ್ಡ್ಗೆ ಬೇಡಿಕೆಯೂ ಹೆಚ್ಚಾಗಿದೆ. ಇದನ್ನು ಹೊರತುಪಡಿಸಿದಂತೆ ಆದ್ಯತಾ ಪಡಿತರ ಚೀಟಿ ಹೊಂದಿರುವವರಲ್ಲಿ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಹೊಂದಿರುವವರಿಗೆ ಪ್ರತಿ ಕಾರ್ಡ್ಗೆ 21ಕೆಜಿ ಅಕ್ಕಿ ಮತ್ತು ಸ್ಥಳೀಯ ಬಳಕೆಗೆ ಅನುಗಣವಾಗಿ 14 ಕೆಜಿ ರಾಗಿ ಅಥವಾ ಜೋಳ ಸೇರಿ ಒಟ್ಟು 35 ಕೆಜಿ ಆಹಾರ ಧಾನ್ಯ ಉಚಿತವಾಗಿ ವಿತರಿಸಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕುಟುಂಬದ ಪ್ರತಿ ಸದಸ್ಯನಿಗೆ 3 ಕೆಜಿ ಅಕ್ಕಿ ಮತ್ತು ಸ್ಥಳೀಯ ಬಳಕೆಗೆ ಅನುಗುಣವಾಗಿ 2 ಕೆಜಿ ರಾಗಿ ಅಥವಾ ಜೋಳ ಉಚಿತವಾಗಿ ಕೊಡಲಾಗುತ್ತಿದೆ.


ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಪಡಿತರ ಚೀಟಿ ಇನ್ನೂ ಲಭ್ಯವಾಗದಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆ. ಆದ್ಯತಾ ಪಡಿತರ ಚೀಟಿ ವಿತರಣೆ ಸಂದರ್ಭ ಅರ್ಜಿದಾರರನ್ನು ವೇತನ, ವಾಹನ, ಸ್ವಂತ ಮನೆ, ಕುಟುಂಬದ ಆದಾಯ ಸೇರಿದಂತೆ ಕೆಲವೊಂದು ಅನರ್ಹತೆಯನ್ನು ಆಧರಿಸಿ ಹೊರಗಿಡುವ ಮಾನದಂಡ ಅನುಸರಿಸುವ ಕ್ರಮ ಜಾರಿಯಲ್ಲಿದೆ. ವಿಲೇವಾರಿಗೆ ಬಾಕಿ ಇರುವ ಅರ್ಜಿಗಳಿಗೆ ಸಂಬAಧಿಸಿದAತೆ ಸ್ಥಳ ಪರಿಶೀಲನೆ ಮಾಡಿ ತ್ವರಿತವಾಗಿ ವಿಲೇವಾರಿ ಮಾಡುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿದೇಶಕರು, ಮತ್ತು ಉಪನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.
ಕೆ.ಹೆಚ್. ಮುನಿಯಪ್ಪ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಖಾತೆ ಸಚಿವ

ಕೃಪೆ: ವಿಜಯವಾಣಿ

Post a Comment

Previous Post Next Post